ಬೆಂಗಳೂರು, ಏಪ್ರಿಲ್ ೧೪: ಸಂವಿಧಾನ ಶಿಲ್ಪಿ ಭಾರತರತ್ನ ಡಾ|| ಬಿ.ಆರ್. ಅಂಬೇಡ್ಕರ್ ರವರ ೧೧೯ನೇ ಜನ್ಮ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ ವಿಧಾನಸೌಧದ ಮುಂಭಾಗದಲ್ಲಿರುವ ಡಾ|| ಅಂಬೇಡ್ಕರ್ ಪ್ರತಿಮಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಲಾರ್ಪಣೆ ಮಾಡಿದರು.
ಡಾ|| ಅಂಬೇಡ್ಕರ್ ಅವರು ಶೋಷಿತ ಜನಾಂಗಕ್ಕೆ ದೊಡ್ಡ ಧ್ವನಿಯಾಗಿದ್ದರು. ಅಖಂಡ ಭಾರತದ ಉಳಿವಿಗಾಗಿ ಹಾಗೂ ಪ್ರಗತಿಗಾಗಿ ಅವರ ಪರಿಶ್ರಮ ಅಪಾರ. ಮಾನವ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ದುಡಿದ ಆ ಮಹಾನುಭಾವರ ಚಿಂತನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಶ್ರಮಿಸಬೇಕಾಗಿದೆ ಎಂದರು.
ನಂತರ ಮಾತನಾಡಿದ ಅವರು ಅಂಬೇಡ್ಕರ್ ವಿಚಾರಧಾರೆಗಳನ್ನು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದ ಮುಖ್ಯಮಂತ್ರಿಯವರು ದಲಿತರ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕ ಉನ್ನತಿ ನೀಡುವುದರ ಮೂಲಕ ಸಾಮಾಜಿಕ ಬದ್ದತೆಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ ಎಂದು ಹೇಳಿದರು. ಮಾಲಾರ್ಪಣೆಗೆ ಮುನ್ನ ಡಾ|| ಅಂಬೇಡ್ಕರ್ ಅವರ ಪುತ್ಥಳಿ ಮತ್ತು ಬುದ್ದನ ಪುತ್ಥಳಿಗೂ ಪುಷ್ಪ ಸಮರ್ಪಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಾಜ ಕಲ್ಯಾಣ ಸಚಿವರಾದ ಸುಧಾಕರ್ ಅವರು ವಹಿಸಿದ್ದರು. ಸಚಿವ ಸಂಪುಟ ಸಚಿವರುಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇಲಾಖೆಗಳ ಎಲ್ಲಾ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.